ಸ್ಕ್ಯಾಂಡಿಯಮ್
	ಆವರ್ತಕೋಷ್ಟಕದ 3ಬಿ ಗುಂಪಿನ 4ನೆಯ ಆವರ್ತದ ಸಂಕ್ರಮಣ ಧಾತು. ಪ್ರತೀಕ Sc. ಪರಮಾಣು ಸಂಖ್ಯೆ 21. ಪರಮಾಣು ತೂಕ 44.96 ದ್ರವನಬಿಂದು 15390 ಸೆ. ಕುದಿಬಿಂದು 27270 ಸೆ. 200ಸೆನಲ್ಲಿ ಸಾಪೇಕ್ಷ ಸಾಂದ್ರತೆ 3. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d1. ವೇಲೆನ್ಸಿ 3. ಸ್ಕ್ಯಾಂಡಿಯಮ್-45, ಸ್ಥಿರ ಸಮಸ್ಥಾನಿ. ಇನ್ನೂ 4 ಸಮಸ್ಥಾನಿಗಳು ಲಭ್ಯ. ರಾಸಾಯನಿಕ ಗುಣಗಳಲ್ಲಿ ಸಾಮ್ಯ ಇರುವುದರಿಂದ ಇದನ್ನು ವಿರಳ ಭಸ್ಮಧಾತು ಎಂದು ಪರಿಗಣಿಸುವುದುಂಟು.

	ಧಾತುಲಭ್ಯತೆಯ ಸಮೃದ್ಧಿಆಧಾರಿತ ಸರಣಿಯಲ್ಲಿ ಭೂಚಿಪ್ಪಿನ 0.0005%ರಷ್ಟಿರುವ  ಸ್ಕ್ಯಾಂಡಿಯಮಿನ ಕ್ರಮಾಂಕ 31. ಅಲ್ಪ ಪ್ರಮಾಣದಲ್ಲಿ ಅನೇಕ ಭಾರಭಸ್ಮ ಅದುರುಗಳಲ್ಲಿ, ತವರ ಮತ್ತು ಟಂಗ್‍ಸ್ಟನ್ ಅದುರುಗಳಲ್ಲಿ ಲಭ್ಯ. ಉದಾ: ಯುಕ್ಸೆನೈಟ್, ಗ್ಯಾಡೊಲಿನೈಟ್, ವುಲ್‍ಫ್ರಮೈಟ್. ಬೈಜಿಕ ವಿದಲನದ ಉತ್ಪನ್ನಗಳಲ್ಲಿಯೂ ಲಭ್ಯ. ಯುಕ್ಸೆನೈಟ್, ಗ್ಯಾಡೊಲಿನೈಟ್ ಅದುರುಗಳಲ್ಲಿ ಇದರ ಆಕ್ಸೈಡ್ ಇದೆ, ಸ್ಕ್ಯಾಂಡಿಯಮನ್ನು ಪತ್ತೆಮಾಡಿದವ (1879)  ಸ್ವೀಡಿಷ್ ರಸಾಯನವಿಜ್ಞಾನಿ ಲಾರ್ಸ್ ಫ್ರೆಡ್ರಿಕ್ ನಿಲ್ಸನ್ (1840-99). ಅದುರು ದೊರೆತ ಸ್ಕ್ಯಾಂಡಿನೇವಿಯ ಸ್ಥಳನಾಮದಿಂದ ಸ್ಫೂರ್ತಿ ಪಡೆದು ಈ ನೂತನ ಧಾತುವನ್ನು ಹೆಸರಿಸಲಾಯಿತು. ರಾಸಾಯನಿಕವಾಗಿ ಬೋರಾನನ್ನು ಹೋಲುವ ಕಾಲ್ಪನಿಕ  ಧಾತು ಎಕಬೋರಾನ್ ಅಸ್ತಿತ್ವ ಕುರಿತು ದ್ಮಿತ್ರಿ ಇವಾನೊವಿಚ್ ಮೆಂದೆಲ್ಯೇವ್ (1834-1907)  ರೂಪಿಸಿದ ಆವರ್ತ ನಿಯಮಾಧಾರಿತ ಭವಿಷ್ಯವಾಣಿಯನ್ನು (1871) ಈ ಆವಿಷ್ಕಾರ ನಿಜವಾಗಿಸಿತು. ಸ್ಕ್ಯಾಂಡಿಯಮ್ ಧಾತುವೇ  ಕಾಲ್ಪನಿಕ  ಧಾತು ಎಕಬೋರಾನ್ ಎಂದು ಗುರುತಿಸಿದವ   (1879) ಪರ್ ತಿಯೊಡೊರ್ ಕ್ಲಾಯೂ (1840-1905). 

	ಪೊಟ್ಯಾಸಿಯಮ್ ಸ್ಕ್ಯಾಂಡಿಯಮ್ ಸಲ್ಫೇಟನ್ನು ಅವಕ್ಷೇಪಿಸುವುದರಿಂದ ಅಥವಾ ಡೈಈಥೈಲ್ ಈಥರಿನಿಂದ ಸ್ಕ್ಯಾಂಡಿಯಮ್ ತಯೊಸಯನೇಟನ್ನು ಆಹರಿಸುವುದರಿಂದ ಸ್ಕ್ಯಾಂಡಿಯಮನ್ನು ಭಸ್ಮಧಾತುಗಳಿಂದ ಸುಲಭವಾಗಿ ಪ್ರತ್ಯೇಕಿಸಬಹುದು. ಪೊಟ್ಯಾಸಿಯಮ್, ಲಿತಿಯಮ್‍ನ ಮತ್ತು ಸ್ಕ್ಯಾಂಡಿಯಮ್ ಕ್ಲೋರೈಡುಗಳ ಯೂಟೆಕ್ಟಿಕ್ ಮಿಶ್ರಣದ ವಿದ್ಯುದ್ವಿಶ್ಲೇಷಣೆಯಿಂದಲೂ ತಯಾರಿಯ ಆವಿಷ್ಕಾರ 1936ರಲ್ಲಾಯಿತು. ಈಗ ಡ್ಯಾವಿಡೈಟ್ ಖನಿಜದಿಂದ ಯುರೇನಿಯಮ್ ಆಹರಿಸುವಾಗ ಉಪೋತ್ಪನ್ನವಾಗಿ ಅಲ್ಪಪ್ರಮಾಣದಲ್ಲಿ ಪಡೆಯಲಾಗುತ್ತಿದೆ.

	ನಸುಹಳದಿ ಛಾಯೆಯುಕ್ತ ಬೆಳ್ಳಿಬಿಳುಪಿನ ಕ್ರಿಯಾಶೀಲ ಮೃದು ಲೋಹವಿದು. ಆಮ್ಲಗಳೊಂದಿಗೆ ವರ್ತಿಸಿ ತ್ರಿವೇಲೆನ್ಸೀಯ ಬಣ್ಣರಹಿತ ಲವಣಗಳನ್ನು ನೀಡುತ್ತದೆ. Sಛಿ3+ ಸಂಕೀರ್ಣ ಅಯಾನುಗಳನ್ನು ರೂಪಿಸುವ ಒಲವು ಇರುವ ಪ್ರಬಲ ಆಮ್ಲೀಯ ಅನುಕಾಂತೀಯ ಅಯಾನು. ಪರಿವೇಷ್ಟ ಉಷ್ಣತೆಯಲ್ಲಿ (ಆ್ಯಂಬಿಯೆಂಟ್ ಟೆಂಪರೇಚರ್) ಆಕ್ಸಿಜನ್ನಿನೊಂದಿಗೆ ವರ್ತಿಸುತ್ತದೆ. ಸಂಯುಕ್ತಗಳಲ್ಲಿ ಸ್ಕ್ಯಾಂಡಿಯಮಿನದು Sಡಿ3 ಅಯಾನ್ ರೂಪದ +3 ಉತ್ಕರ್ಷಣ ಸ್ಥಿತಿ. ಹೈಡ್ರೊಕ್ಲೋರಿಕ್, ಸಲ್ಫ್ಯೂರಿಕ್ ಮತ್ತು ನೈಟ್ರಿಕ್ ಆಮ್ಲಗಳಲ್ಲಿ ವಿಲೇಯ.

	ಪೆಟ್ರೋಲಿಯಮ್‍ತೈಲ ಸಂಸ್ಕರಣೆಯಲ್ಲಿ, ಹಗುರ ಮಿಶ್ರಲೋಹ ತಯಾರಿಯಲ್ಲಿ, ಉಜ್ಜ್ವಲ ಬೆಳಕು ನೀಡುವ ಮಕ್ರ್ಯುರಿ ವೇಪರ್ ದೀಪಗಳಲ್ಲಿ ಸೀಮಿತ ಬಳಕೆ.							
	(ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ